ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಪ್ರತಿಷ್ಠಿತ ಪತ್ರಕರ್ತರ ಭೋಜನ ಕೂಟದಲ್ಲಿ ಎಂಟು ಸುತ್ತು ಗುಂಡು ಹಾರಿದ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

ಅಮೆರಿಕಾದಲ್ಲಿ ಶನಿವಾರ ರಾತ್ರಿ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್ ನಡೆಯುತ್ತಿದ್ದ ಸಭಾಂಗಣದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿ ಬಂದಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ರಕ್ಷಣಾ ಸಚಿವ ಪೀಟ್ ಹೆಕ್ಸೆತ್ ಮತ್ತು ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಸೇರಿದಂತೆ ಅಮೆರಿಕಾದ ಹಿರಿಯ ನಾಯಕರೆಲ್ಲ ಅಲ್ಲಿ ಉಪಸ್ಥಿತರಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಒಟ್ಟು ಎಂಟು ಸುತ್ತು ಗುಂಡು ಹಾರಿದ್ದು, ಯಾರಿಗೂ ಯಾವ ಅಪಾಯವೂ ಆಗಿಲ್ಲ.

ಟ್ರಂಪ್ ಅವರ ಪ್ರತಿಕ್ರಿಯೆ

"Let the show go on" — ದಾಳಿಯ ನಂತರ ಟ್ರಂಪ್ ತಮ್ಮ Truth Social ನಲ್ಲಿ ಬರೆದುಕೊಂಡರು. ಈ ದಾಳಿಯನ್ನು ಅವರು ಲೋನ್ ವುಲ್ಫ್ ಅಟ್ಯಾಕ್ ಎಂದು ಬಣ್ಣಿಸಿದ್ದಾರೆ.

ಶೂಟರ್ ಯಾರು?

ಬಂಧನವಾದ ವ್ಯಕ್ತಿ ಕ್ಯಾಲಿಫೋರ್ನಿಯಾ ಮೂಲದ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ತಿಳಿದು ಬಂದಿದೆ. ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಡೊಮಿಂಗ್ಯೂಸ್ ಹಿಲ್ಸ್‌ನಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಈ ವ್ಯಕ್ತಿ ಪತ್ರಕರ್ತರ ವೇಷದಲ್ಲಿ ಒಳ ಬಂದಿರಬಹುದು ಎಂದು ಅನುಮಾನಿಸಲಾಗುತ್ತಿದೆ. ತನಿಖೆ ನಡೆಯುತ್ತಿದ್ದು, ದಾಳಿಯ ಹಿಂದಿನ ನಿಜವಾದ ಉದ್ದೇಶ ಇನ್ನೂ ಖಚಿತಗೊಂಡಿಲ್ಲ.

ಇರಾನ್ ಸಂಬಂಧ ಇದೆಯಾ?

ಇರಾನ್ ಈ ಹಿಂದೆಯೇ ಟ್ರಂಪ್ ಮೇಲೆ ಬದಲು ತೀರಿಸಿಕೊಳ್ಳುವ ಬೆದರಿಕೆ ಹಾಕಿತ್ತು. ಇರಾನ್ ಉಸ್ತುವಾರಿ ನಾಯಕ ಅಲಿ ಲಾರಿಜಾನಿ "2024ರಲ್ಲಿ ತಪ್ಪಿಸಿಕೊಂಡ ಟ್ರಂಪ್ ಅನ್ನು ಈ ಬಾರಿ ಬಿಡೋದಿಲ್ಲ" ಎಂದು ಸಾರ್ವಜನಿಕವಾಗಿ ಹೇಳಿದ್ದರು. ಅಮೆರಿಕಾ-ಇರಾನ್ ಶಾಂತಿ ಸಂಧಾನ ವಿಫಲವಾದ ಬೆನ್ನಲ್ಲೇ ಈ ದಾಳಿ ನಡೆದಿರುವ ಕಾರಣ, ಐಆರ್‌ಜಿಸಿ ಮತ್ತು ಕುದ್ಸ್ ಫೋರ್ಸ್ ಕೈವಾಡದ ಅನುಮಾನ ಬಲವಾಗಿ ಕೇಳಿ ಬರುತ್ತಿದೆ.

ಇದನ್ನೂ ಓದಿ: ವೈಟ್ ಹೌಸ್ ಡಿನ್ನರ್‌ನಲ್ಲಿ ಗುಂಡಿನ ದಾಳಿ: 'ನನಗೆ ಮನೆಗೆ ಹೋಗಬೇಕು' ಎಂದು ಅಳುತ್ತಾ ಹೇಳಿದ ಎರಿಕಾ ಕರ್ಕ್

ಐತಿಹಾಸಿಕ ಸಂದರ್ಭ

1981 ರಲ್ಲಿ ಅದೇ ಹೋಟೆಲ್ ಮುಂಭಾಗದಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ಮೇಲೆ ಹತ್ಯಾಯತ್ನ ನಡೆದಿತ್ತು. 1921 ರಿಂದ ನಡೆದು ಬರುತ್ತಿರುವ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್‌ಗೆ ಈ ಬಾರಿ ಟ್ರಂಪ್ ವಿಶೇಷವಾಗಿ ಭಾಗವಹಿಸಿದ್ದರು.


ಈ ದಾಳಿಯ ನಂತರ ಅರಬ್ ಸಮುದ್ರದಲ್ಲಿ ಅಮೆರಿಕಾ ಸೇನಾ ನಿಯೋಜನೆ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.