ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಮೂರನೇ ಸುತ್ತಿನ ಮಾತುಕತೆ ಯಶಸ್ವಿಯಾಗಿದ್ದು, ಇದರ ಬೆನ್ನಲ್ಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಸಿಜೆಪಿ ಘೋಷಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಜೆಪಿ ಮಂಡಿಸಿದ ಐದು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿ ವಕ್ತಾರ ಸೌರಭ್ ದಾಸ್, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪ್ರತಿಭಟನಾಕಾರರು ಮತ್ತು ಸಂಘಟಕರ ವಿರುದ್ಧ ದೇಶದಾದ್ಯಂತ ದಾಖಲಾಗಿರುವ ಎಫ್‌ಐಆರ್ (FIR) ರದ್ದುಗೊಳಿಸುವುದು ಮತ್ತು ಭವಿಷ್ಯದಲ್ಲಿ ಯಾವುದೇ ಪ್ರಕರಣಗಳನ್ನು ದಾಖಲಿಸದಿರುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಮಾನ್ಯ ಮಾಡಿದೆ ಎಂದು ತಿಳಿಸಿದರು.

ಶೈಕ್ಷಣಿಕ ಸುಧಾರಣೆಗಳು ಮತ್ತು ಪರೀಕ್ಷಾ ವ್ಯವಸ್ಥೆಯ ಬದಲಾವಣೆಗಳಿಗೆ ಸಂಬಂಧಿಸಿದಂತೆ ಐದು ಅಂಶಗಳ ಬೇಡಿಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಮುಂದಿನ ನಾಲ್ಕು ವಾರಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲಾಗುವುದು ಎಂದು ಸೌರಭ್ ದಾಸ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಜೆ.ಪಿ. ನಡ್ಡಾ, ಪ್ರತಿಭಟನಾಕಾರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಕಾನೂನು ಪ್ರಕ್ರಿಯೆ ನಡೆಯಲಿದೆ. ಅಲ್ಲದೆ, ಸಂತ್ರಸ್ತರಿಗೆ ನಿಯಮಾನುಸಾರ ಗರಿಷ್ಠ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಶನಿವಾರವಷ್ಟೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆಯನ್ನು ಸಿಜೆಪಿ ತನ್ನ ಹೋರಾಟದ ಮೊದಲ ದೊಡ್ಡ ಗೆಲುವು ಎಂದು ಬಣ್ಣಿಸಿದೆ. ಸಚಿವರ ರಾಜೀನಾಮೆಯ ಸುದ್ದಿ ತಿಳಿಯುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ನೆರೆದಿದ್ದ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸಂಭ್ರಮಾಚರಣೆ ನಡೆಸಿದರು. ಸಂಘಟನೆಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ, ಜನರ ಒಗ್ಗಟ್ಟಿನಿಂದಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: Daily Horoscope 26-07-2026: ಇಂದಿನ ರಾಶಿ ಭವಿಷ್ಯ ತಿಳಿಯಿರಿ!