ಬಂಟ್ವಾಳ, ಜುಲೈ 20: ಸಮಯಪ್ರಜ್ಞೆ ಹಾಗೂ ಮಾನವೀಯತೆಗೆ ಉತ್ತಮ ನಿದರ್ಶನವಾಗಿ, ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಅವರ ಸಿಬ್ಬಂದಿ ಒಂದು ಮಗುವೂ ಸೇರಿದಂತೆ ಮೂವರ ಜೀವ ಉಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುರಿಕುಮೇರು ಪೆಟ್ರೋಲ್ ಬಂಕ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿತ್ತು. ಈ ಅಪಘಾತದಲ್ಲಿ ಕಾರಿನೊಳಗಿದ್ದ ಮಗು, ಮಹಿಳೆ ಹಾಗೂ ಚಾಲಕ ಸಿಲುಕಿಕೊಂಡಿದ್ದರು. ಆ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಅವರ ಚುರುಕಿನ ಕಾರ್ಯಾಚರಣೆಯಿಂದಾಗಿ ಮೂವರನ್ನೂ ಸುರಕ್ಷಿತವಾಗಿ ಕಾರಿನಿಂದ ಹೊರತೆಗೆಯಲಾಯಿತು. ಅಳುತ್ತಿದ್ದ ಪುಟ್ಟ ಮಗುವನ್ನು ಸಬ್ ಇನ್ಸ್‌ಪೆಕ್ಟರ್ ಅವರೇ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯಗಳು ಜನರ ಮನಸ್ಸನ್ನು ಆರ್ದ್ರಗೊಳಿಸಿವೆ. ಸ್ಥಳೀಯರ ಪ್ರಕಾರ, ಪೊಲೀಸರ ತ್ವರಿತ ರಕ್ಷಣಾ ಕಾರ್ಯದಿಂದಾಗಿಯೇ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿ, ಅಪಾಯದಿಂದ ಪಾರಾಗಿದ್ದಾರೆ.
ಈ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಧಿಕಾರಿಯ ಕಾರ್ಯವನ್ನು ಕೊಂಡಾಡುತ್ತಿದ್ದಾರೆ. "ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಹೆಮ್ಮೆ", "ಕರ್ತವ್ಯಕ್ಕಿಂತ ಮಾನವೀಯತೆಗೆ ಆದ್ಯತೆ ನೀಡಿದ ಅಧಿಕಾರಿ", "ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗಿ ಅಮೂಲ್ಯ ಜೀವಗಳನ್ನು ಉಳಿಸಿದ ನಿಜವಾದ ಜನಸೇವಕ" ಎಂಬಂತಹ ಪ್ರತಿಕ್ರಿಯೆಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.
ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಅವರ ಸಿಬ್ಬಂದಿ ಕರುಣಾಕರ ಅವರ ಕರ್ತವ್ಯನಿಷ್ಠೆ, ಮಾನವೀಯತೆ ಮತ್ತು ತ್ವರಿತ ಕಾರ್ಯಾಚರಣೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಕಮೆಂಟ್ಗಳು
ಇನ್ನೂ ಕಮೆಂಟ್ಗಳಿಲ್ಲ. ಮೊದಲ ಕಮೆಂಟ್ ಬರೆಯಿರಿ!
✍️ ನಿಮ್ಮ ಅಭಿಪ್ರಾಯ ಬರೆಯಿರಿ